ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಶ್ರೀ ಎನ್.ವಿ. ಅಂಜಾರಿಯಾ
ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಶ್ರೀ ಎನ್.ವಿ. ಅಂಜಾರಿಯಾ
ಗೌರವಾನ್ವಿತ ನ್ಯಾಯಮೂರ್ತಿಗಳು ಶ್ರೀ ಎನ್. ವಿ. ಅಂಜಾರಿಯಾ ಅವರು ಮಾರ್ಚ್ 23, 1965 ರಂದು ಅಹಮದಾಬಾದ್ನಲ್ಲಿ ಜನಿಸಿದರು. ಶ್ರೀಯುತರು ವಕೀಲರ ಕುಟುಂಬದಿಂದ ಬಂದವರಾಗಿದ್ದಾರೆ. ಅವರ ತಂದೆಯೂ ನ್ಯಾಯಾಂಗದಲ್ಲಿದ್ದರು. ಶ್ರೀಯುತರು ಅಹಮದಾಬಾದ್ನ H.L. ಕಾಲೇಜ್ ಆಫ್ ಕಾಮರ್ಸ್ನಿಂದ ಪದವಿ ಪಡೆದರು. ಅವರು 1988 ರಲ್ಲಿ ಸರ್ L.A. ಶಾ ಕಾನೂನು ಕಾಲೇಜಿನಿಂದ LL.B ಪದವಿಯನ್ನು ಮತ್ತು 1989 ರಲ್ಲಿ ಅಹಮದಾಬಾದ್ನ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಶ್ರೀಯುತರು ಆಗಸ್ಟ್ 1988 ರಲ್ಲಿ ಗುಜರಾತಿನ ಉಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿದ್ದ ಶ್ರೀ ಎಸ್.ಎನ್. ಶೆಲತ್ ಅವರ ಕಛೇರಿಯನ್ನು ಸೇರುವ ಮೂಲಕ ವೃತ್ತಿ ಅಭ್ಯಾಸವನ್ನು ಪ್ರಾರಂಭಿಸಿದರು. ಅವರು ಸಾಂವಿಧಾನಿಕ ಸಮಸ್ಯೆಗಳು ಮತ್ತು ನಾಗರಿಕ ಪ್ರಕರಣಗಳು, ಕಾರ್ಮಿಕ ಮತ್ತು ಸೇವೆಯ ಎಲ್ಲಾ ವರ್ಗಗಳನ್ನು ಒಳಗೊಂಡಿರುವ ವ್ಯಾಜ್ಯಗಳನ್ನು ನಿರ್ವಹಿಸಿರುತ್ತಾರೆ. ಅವರು ಉಚ್ಚ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳಲ್ಲಿ ವಕೀಲರಾಗಿ ರಾಜ್ಯ ಚುನಾವಣಾ ಆಯೋಗ, ಗುಜರಾತ್ ಮಾಹಿತಿ ಆಯೋಗ, ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮ, ಪುರಸಭೆಗಳು ಇತ್ಯಾದಿಗಳಿಗೆ ಸ್ಥಾಯಿ ಸಲಹೆಗಾರ / ಪ್ಯಾನಲ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀಯುತರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿ.ಬಿ.ಐ), ಬಿ.ಎಸ್.ಎನ್.ಎಲ್, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯು.ಪಿ.ಎಸ್.ಸಿ), ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯು.ಜಿ.ಸಿ), ಆಲ್ ಇಂಡಿಯ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಶನ್(ಎ.ಐ.ಸಿ.ಟಿ.ಇ), ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜ್ಯುಕೇಶನ್(ಎನ್.ಸಿ.ಟಿ.ಇ) ಮುಂತಾದ ಸಂಸ್ಥೆಗಳಿಗೆ ಹಿರಿಯ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಮಾನ್ಯರಿಗೆ 1992 ರಲ್ಲಿ ಅಹಮದಾಬಾದ್ನ ದಿವಂಗತ ಶ್ರೀ ನವೀನಚಂದ್ರ ದೇಸಾಯಿ ಫೌಂಡೇಶನ್ನಿಂದ ‘ಫ್ರೀಡಮ್ ಆಫ್ ಸ್ಪೀಚ್ ಅಂಡ್ ಎಕ್ಸ್ಪ್ರೆಷನ್ – ವಿಥ್ ರೆಫರೆನ್ಸ್ ಟು ಮೀಡಿಯಾ’ ಎಂಬ ವಿಷಯದ ಕುರಿತು ಸಂಶೋಧನಾ ಫೆಲೋಶಿಪ್ ನೀಡಲಾಗಿದೆ. ಶ್ರೀಯುತರು ಗುಜರಾತ್ ಲಾ ಹೆರಾಲ್ಡ್ ನ ಗೌರವಾನ್ವಿತ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಉಚ್ಛ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ನುರಿತ ಮಧ್ಯಸ್ಥಿಕೆದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರು ಸಾಂವಿಧಾನಿಕ ಮತ್ತು ಕಾನೂನು ವಿಷಯಗಳ ಕುರಿತು ಬರೆದ ಲೇಖನಗಳು, ಬರಹಗಳು ಹಲವು ಪುಸ್ತಕಗಳು, ಕಾನೂನು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಏಪ್ರಿಲ್ 2010 ರಲ್ಲಿ ಗುಜರಾತ್ ಉಚ್ಛ ನ್ಯಾಯಾಲಯದ ಸುವರ್ಣ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಪ್ರಕಟವಾದ ಸ್ಮರಣಿಕೆಯಲ್ಲಿ ‘ಹೈ ಕೋರ್ಟ್ ಆಫ್ ಗುಜರಾತ್: ಅಡ್ವೆಂಟ್ ಮತ್ತು ಆರೋಹಣ’ ಎಂಬ ಬರಹವನ್ನು ಬರೆಯಲು ಶ್ರೀಯುತರು ನೀಡಿರುವ ಕೊಡುಗೆ ವಿಶೇಷವಾಗಿದೆ.
ಶ್ರೀಯುತರು ನವೆಂಬರ್ 21, 2011 ರಂದು ಗುಜರಾತ್ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು ಮತ್ತು ಸೆಪ್ಟೆಂಬರ್ 06, 2013 ರಂದು ಗುಜರಾತ್ ಉಚ್ಛ ನ್ಯಾಯಾಯದ ಖಾಯಂ ನ್ಯಾಯಾಯಮೂರ್ತಿಗಳಾಗಿ ನೇಮಕಗೊಂಡರು.
ಶ್ರೀಯುತರು ಫೆಬ್ರವರಿ 25, 2024 ರಂದು ಕರ್ನಾಟಕದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
.